ಚಿಕ್ಕಬಳ್ಳಾಪುರ: ಆಶಾಡ ಮಾಸದ ಕೊನೆಯ ಸೋಮವಾರದ ಅಂಗವಾಗಿ ನಂದಿಗಿರಿಧಾಮದಲ್ಲಿ ನಡೆದ ನಂದಿಗಿರಿ ಪ್ರದಕ್ಷಿಣೆ ಈ ಬಾರಿ ಕಳೆದ ವರ್ಷಕ್ಕಿಂತಲೂ ಹೆಚ್ಚು ವೈಭವದಿಂದ ಹಾಗೂ ಭಕ್ತಿಭಾವದಿಂದ ನೆರವೇರಿತು. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಗಿರಿಪ್ರದಕ್ಷಿಣೆಯಲ್ಲಿ ಪಾಲ್ಗೊಂಡು ಬೋಗನಂದೀಶ್ವರನ ದರ್ಶನ ಪಡೆದು ಪುನೀತರಾದರು.
ದೊಡ್ಡಬಳ್ಳಾಪುರ ನಂದಿಗಿರಿ ಪ್ರದಕ್ಷಿಣೆ ಟ್ರಸ್ಟ್‌ನಿಂದ ಆರಂಭಗೊಂಡ ಈ ಗಿರಿಪ್ರದಕ್ಷಿಣೆ ವರ್ಷದಿಂದ ವರ್ಷಕ್ಕೆ ಭವ್ಯ ರೂಪ ಪಡೆದುಕೊಳ್ಳುತ್ತಿದ್ದು,ಆಶಾಡ ಮಾಸದ ಕೊನೆಯ ಸೋಮವಾರದಂದು ನಂದಿಗಿರಿ ಪ್ರದಕ್ಷಿಣೆ ನಡೆಯುವುದು ಈಗ ಭಕ್ತರಲ್ಲಿ ಪರಂಪರೆಯ ಆಚರಣೆಯಾಗಿ ಬೆಳೆದಿದೆ.ಯಾವುದೇ ವಿಶೇಷ ಆಹ್ವಾನವಿಲ್ಲದಿದ್ದರೂ ಭಕ್ತರು ಸ್ವಯಂಪ್ರೇರಿತವಾಗಿ ಕುಟುಂಬ ಸಮೇತರಾಗಿ ಆಗಮಿಸಿ ಗಿರಿಪ್ರದಕ್ಷಿಣೆಯಲ್ಲಿ ಭಾಗವಹಿಸುತ್ತಾರೆ.ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ನಂದಿಗಿರಿಗೆ ಆಗಮಿಸಿದ್ದು, ಕೇಸರಿ ವಸ್ತ್ರ ಮತ್ತು ಕೇಸರಿ ಧ್ವಜಗಳಿಂದ ಪ್ರದೇಶವು ಭಕ್ತಿಮಯ ವಾತಾವರಣದಿಂದ ಕಂಗೊಳಿಸಿತು.

ಇದೇ ವೇಳೆ ಭಕ್ತರೊಂದಿಗೆ ಹೆಜ್ಜೆ ಹಾಕಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಶಕ್ತಿದೇವರ ನೆಲೆ ಇದೆ.ಬೋಗನಂದೀಶ್ವರ ದೇವಾಲಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಮಹತ್ವದ ಪುಣ್ಯಕ್ಷೇತ್ರವನ್ನಾಗಿ ರೂಪಿಸೋಣ.ಹಿರಿಯರು ಆರಂಭಿಸಿದ ಈ ಗಿರಿಪ್ರದಕ್ಷಿಣೆ ಪರಂಪರೆಗೆ ಎಲ್ಲರೂ ಕೈಜೋಡಿಸಿ ಭಕ್ತಿಯಿಂದ ದೇವರ ಆಶೀರ್ವಾದ ಪಡೆಯೋಣ ಎಂದು ಕರೆ ನೀಡಿದರು.
ಗಿರಿಪ್ರದಕ್ಷಿಣೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರ ಅನುಕೂಲಕ್ಕಾಗಿ ಸಮಾಜಸೇವಕರು ಹಾಗೂ ದಾನಿಗಳು ಮಾರ್ಗದುದ್ದಕ್ಕೂ ಕುಡಿಯುವ ನೀರು,ತಂಪು ಪಾನೀಯ, ಒಆರ್‌ಎಸ್, ಹಣ್ಣು-ಹಂಪಲು ಹಾಗೂ ತಿಂಡಿ-ತೀರ್ಥದ ವ್ಯವಸ್ಥೆ ಮಾಡಿದ್ದರು.ವಿಶೇಷವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಸಮಾಜಸೇವಕ ಹಾಗೂ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ.ಬಿ ರೆಡ್ಡಿ ಸಾವಿರಾರು ಭಕ್ತರಿಗೆ ಅನ್ನದಾನ ಹಾಗೂ ತಿಂಡಿ ವಿತರಿಸುವ ವ್ಯವಸ್ಥೆ ಮಾಡಿದ್ದರು.
ಈ ವೇಳೆ ಮಾತನಾಡಿದ ಸಂದೀಪ ರೆಡ್ಡಿ, ಭಕ್ತರಿಗೆ ಸೇವೆ ಸಲ್ಲಿಸುವುದು ಪುಣ್ಯದ ಕಾರ್ಯ ಎಂಬ ಭಾವನೆಯಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಬೋಗನಂದೀಶ್ವರನ ಕೃಪೆ ಎಲ್ಲರ ಮೇಲೂ ಇರಲಿ.ರಾಜ್ಯದಲ್ಲಿ ವರ್ಷವಿಡೀ ಉತ್ತಮ ಮಳೆ-ಬೆಳೆ ಆಗಲಿ ಎಂಬ ಸಂಕಲ್ಪದೊಂದಿಗೆ ಗಿರಿಪ್ರದಕ್ಷಿಣೆಗೆ ಬರುವ ಭಕ್ತರಿಗೆ ನನ್ನದೊಂದು ಅಳಿಲು ಸೇವೆಯಾಗಿ ಈ ಅನ್ನದಾನವನ್ನು ಸಮರ್ಪಿಸುತ್ತಿದ್ದೇನೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಪ್ರೀತಿ ಎಲ್ಲರ ಮೇಲಿದೆ ಎಂದು ಹೇಳಿದರು.
ಗಿರಿಪ್ರದಕ್ಷಿಣೆಯಲ್ಲಿ ಪಾಲ್ಗೊಂಡಿದ್ದ ಅನೇಕ ಭಕ್ತರು ತಮ್ಮ ಅನುಭವಗಳನ್ನು ಹಂಚಿಕೊಂಡು, ನಂದಿಗಿರಿ ಪ್ರದಕ್ಷಿಣೆ ಆಧ್ಯಾತ್ಮಿಕ ನೆಮ್ಮದಿ,ಶಿಸ್ತು ಹಾಗೂ ಸಾಮಾಜಿಕ ಸಾಮರಸ್ಯದ ಸಂಕೇತವಾಗಿದ್ದು,ಪ್ರತಿವರ್ಷ ಇನ್ನಷ್ಟು ಭವ್ಯವಾಗಿ ಆಯೋಜಿಸಬೇಕು ಎಂದು ಅಭಿಪ್ರಾಯಪಟ್ಟರು.
-ಮುಬಷೀರ್ ಅಹಮದ್
